ಫಿರ್ದೂಸಿ
ಸು. 940-1020 ಸುಪ್ರಸಿದ್ಧ ಷರ್ಷಿಯನ್ ಕವಿ. ಷಹನಾಮಾ ಕಾವ್ಯದ ಕರ್ತೃ. ಅಬುಲ್ ಕಾಸಿಮ್ ಮನ್ಸೂರ್ ಅಹಮದ್ (ಅಥವಾ ಹಸನ್) ಇವನ ನಿಜನಾಮ. ಫಿರ್ದೂಸಿ ಕಾವ್ಯನಾಮ. ಷರ್ಷಿಯನ್ ಭಾಷೆಯಲ್ಲಿ ಈ ಪದಕ್ಕೆ `ಸ್ವರ್ಗ ಎಂಬ ಅರ್ಥವಿದೆ. ಖೋರಾಸಾನ್‍ನ ಪ್ರಾಚೀನ ಪಟ್ಟಣವಾದ ತೂಸ್‍ನ ಸಮೀಪದ ಬಾಜ್ ಎಂಬ ಸ್ಥಳದಲ್ಲಿ ಜನಿಸಿದ. ಈ ಸ್ಥಳ ಟೆಹರಾನಿನಿಂದ ಸುಮಾರು 960 ಕಿ.ಮೀ. ದೂರದಲ್ಲಿದೆ. ಷಹನಾಮಾದಲ್ಲಿ ಈತನ ಕೆಲವು ಜೀವನ ವಿವರಗಳು ದೊರೆಯುತ್ತವೆ. ಅದರಂತೆ ಕವಿಗೆ ಮಸೂದ್ ಎಂಬ ಒಬ್ಬ ತಮ್ಮನಿದ್ದನೆಂದೂ ಇವನ ವೈವಾಹಿಕ ಜೀವನ ಬಹು ಬೇಗ ಆರಂಭವಾಯಿತೆಂದೂ ಇವನಿಗೆ ಇಬ್ಬರು ಮಕ್ಕಳಿದ್ದರೆಂದೂ ತಿಳಿದುಬರುತ್ತದೆ. ಹೆಂಡತಿಯ ಮತ್ತು ಮಕ್ಕಳ ಹೆಸರುಗಳನ್ನು ಕವಿ ಎಲ್ಲೂ ಹೇಳಿಕೊಂಡಿಲ್ಲ. ಈತ ಘಜ್ನಿ ಮಹಮೂದನ (ಸು. 998-1030) ಆಸ್ಥಾನ ಕವಿಯಾಗಿ ಮನ್ನಣೆ ಪಡೆದ. ಸುಲ್ತಾನ ಮಹಮೂದ್‍ನಿಗೂ ಕವಿಗೂ ಗಾಢಸ್ನೇಹವಿತ್ತೆಂದೂ ಈ ಸ್ನೇಹದ ಕುರುಹಾಗಿ ಕವಿ ಷಹನಾಮಾ ಕಾವ್ಯವನ್ನು ಆಸ್ಥಾನ ಕವಿಯಾಗುವುದಕ್ಕೆ ಮುನ್ನವೇ ರಚಿಸಲಾರಂಭಿಸಿದ್ದನೆ ಅಥವಾ ಆಸ್ಥಾನಕವಿಯಾದ ಅನಂತರ ರಚನೆಗೆ ಕೈ ಹಾಕಿದನೆ ಎಂಬ ವಿಷಯದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಷಹನಾಮಾ ರಚನೆಯ ಹಿನ್ನೆಲೆಯಲ್ಲಿ ದಂತಕಥೆಯೊಂದಿದೆ. ಫಿರ್ದೂಸಿ ಕಾವ್ಯ ರಚಿಸಿದರೆ ಕಾವ್ಯದ ಪ್ರತಿಸಾಲಿಗೂ ಒಂದು ಸಾವಿರ ದೀನಾರ (ಚಿನ್ನದ ನಾಣ್ಯ) ಕೊಡುವುದಾಗಿ ಸುಲ್ತಾನ ಮಹಮೂದ್ ಆಶ್ವಾಸವೆ ನೀಡಿದ್ದ. ಅದರಂತೆ ಕವಿ ಸುಮಾರು 30 ವರ್ಷಗಳಕಾಲ ದುಡಿದು 60,000 ದ್ವಿಪದಿಗಳ ಮಹಾಕಾವ್ಯ ರಚಿಸಿದ. ಅನಂತರ ಆಶ್ವಾಸನೆಯಂತೆ ತನಗೆ 60,000 ದೀನಾರಗಳನ್ನು ಕೊಡುವಂತೆ ರಾಜನಿಗೆ ಕವಿ ಮನವಿಮಾಡಿ ಕೊಂಡ. ಫಿರ್ದೂಸಿಯ ಪ್ರತಿಭೆಯ ಬಗ್ಗೆ ಅಸೂಯೆ ಪಡುತ್ತಿದ್ದ ರಾಜಾಸ್ಥಾನದ ಕೆಲವರ ಪಿತೂರಿಯಿಂದಾಗಿ ಸುಲ್ತಾನ 60,000 ಸೇವಕನಿಗೂ, ಇನ್ನುಳಿದ 20ಸಾವಿರವನ್ನು. ತನಗೊಂದು ಲೋಟ ಷರಬತ್ತು ಕೊಟ್ಟವನಿಗೂ ಹಂಚಿದನೆಂದು ಹೇಳುವರು. ನಿರಾಶೆಯಿಂದ ಕವಿಯ ಮನಸ್ಸು ತಪ್ತಗೊಂಡಿತು. ಸುಲ್ತಾನನ್ನು ಕುರಿತು ವಿಡಂಬನ ಕಾವ್ಯವೊಂದನ್ನು ಬರೆದು ಕಟುವಾಗಿ ಟೀಕಿಸಿದನೆಂದೂ ಈ ಸುದ್ದಿ ಸುಲ್ತಾನನಿಗೆ ಮುಟ್ಟಿ ಆತ ಕೋಪಗೊಂಡು ಫಿರ್ದೂಸಿಯನ್ನು ಆನೆಯ ಕಾಲಿನಿಂದ ತುಳಿಸಿ ಸಾಯಿಸುವಂತೆ ಆಜ್ಞಾಪಿಸಿದನೆಂದೂ ಆದರೆ ಅಷ್ಟರಲ್ಲಾಗಲೇ ಕವಿ ತನ್ನ ಹುಟ್ಟೂರಾದ ತೂಸ್‍ಗೆ ಹೊರಟುಹೋಗಿದ್ದನೆಂದೂ ಹೇಳುವರು, ಕೆಲವು ವರ್ಷಗಳ ಬಳಿಕ ಒಂದು ಸಂದರ್ಭದಲ್ಲಿ ಸುಲ್ತಾನನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪಗೊಂಡ ಸುಲ್ತಾನ ತನ್ನ ಮಾತಿನಂತೆ 60,000 ದೀನಾರಗಳನ್ನು ಕವಿಯಿದ್ದ ಸ್ಥಳಕ್ಕೆ ಒಂಟೆಯ ಮೇಲೆ ಕಳುಹಿಸಿಕೊಟ್ಟ. ಅದೇ ವೇಳೆಗೆ ಕವಿ ಮರಣ ಕಳೇಬರದ ಯಾತ್ರೆ ಹೊರಡುವುದೂ ಸಮನಾಯಿತೆಂದು ಹೇಳುವರು.					(ಎಲ್. ಆರ್.ಕೆ.)

ಜಗತ್ತಿನ ಮಹಾಕಾವ್ಯಗಳಲ್ಲಿ ಒಂದಾದ ಷಹನಾಮ ಒಂದು ಬೃಹತ್ ವೀರ ಕಾವ್ಯ. ದ್ವಿಪದಿ ಪದ್ಯಗಳನ್ನೊಳಗೊಂಡಿರುವ ಈ ಕಾವ್ಯ ಪರ್ಷಿಯನ್ ಭಾಷೆಯಲ್ಲಿಯೇ ಬಹು ಸರಳ ಹಾಗೂ ಜನಪ್ರಿಯ ಛಂದಸ್ಸೆಂದು ಪ್ರಸಿದ್ಧವಾಗಿರುವ ಬಹರ್-ಇ-ತಾ ಖರಬ್ ಛಂದಸ್ಸಿನಲ್ಲಿ (ಮಸ್ನವಿ) ರಚಿತವಾಗಿದೆ. ಇದರ ರಚನೆ ಸು. 980ರಲ್ಲಿ ಆರಂಭವಾಗಿ ಸು.1010ರಲ್ಲಿ ಮುಗಿಯಿತು. ಇರಾನಿನ ರಾಷ್ಟ್ರೀಯ ಕಾವ್ಯವೆಂದು ಪರಿಗಣಿತವಾಗಿದೆ. ಇದರಲ್ಲಿ 60,000 ದ್ವಿಪದಿಗಳಿವೆ ಎಂದು ಹೇಳಿದರೂ ವಾಸ್ತವವಾಗಿ ಕೆಲವೊಂದು ಪ್ರತಿಗಳಲ್ಲಿ 44,000 ಮತ್ತು 54,000 ದ್ವಿಪದಿಗಳು ಮಾತ್ರ ಇವೆ. ಬಹಳಷ್ಟು ಹಸ್ತಪ್ರತಿಗಳಲ್ಲಿ ದೊರೆಯುವುದು 50,000 ದ್ವಿಪದಿಗಳು ಮಾತ್ರ. ಇವನ್ನು 80 ಅಧ್ಯಾಯಗಳಾಗಿ ವಿಭಾಗಿಸಲಾಗಿದ್ದು ಈ ಅಧ್ಯಾಯಗಳನ್ನು ದಾಸ್ತಾನ್ ಎಂದು ಕರೆಯಲಾಗಿದೆ. ಷಹನಾಮಾ ಎಂದರೆ ಷರ್ಷಿಯನ್ ಭಾಷೆಯಲ್ಲಿ `ರಾಜರ ಪುಸ್ತಕ ಎಂದರ್ಥ. ಸೃಷ್ಟಿಯ ಆದಿಯಿಂದ ಸಸ್ಸಾನಿಯನ್ ಸಾಮ್ರಾಜ್ಯವನ್ನು ಕ್ರಿ.ಶ. ಸು. 600ರಲ್ಲಿ ಅರಬರು ವಶಪಡಿಸಿ ಕೊಳ್ಳುವವರೆಗೆ ಈ ಕಾವ್ಯದ ಹರಹು ಇದೆ. 
ಇರಾನ್ ಸಾಮ್ರಾಜ್ಯದ ವೈಭವ ಹಾಗೂ ಪತನವನ್ನು ಈ ಕಾವ್ಯ ಸವಿಸ್ತಾರವಾಗಿ ವರ್ಣಿಸುತ್ತದೆ. ಕಲ್ಪನೆ ಪುರಾಣ ಚರಿತ್ರೆ ಈ ಮೂರೂ ಕಾವ್ಯದಲ್ಲಿ ಒಂದಾಗಿ ಬೆಸೆದುಕೊಂಡಿವೆ. ಇತಿಹಾಸಕ್ಕಿಂತ ಪುರಾಣದ ಅಂಶವೇ ಕೃತಿಯಲ್ಲಿ ಮೇಲುಗೈಯಾಗಿದೆ. ಕಾವ್ಯದುದ್ದಕ್ಕೂ ಕವಿ ಪ್ರತಿಭೆ ಮಿಂಚಿದೆ. ಅನೇಕ ಸುಂದರ ಆಖ್ಯಾಯಿಕೆಗಳು ಕಾವ್ಯ ರಸಿಕರ ಮನಸ್ಸನ್ನು ಸೂರೆಗೊಳ್ಳುತ್ತವೆ. ನಿರೂಪಣೆ, ವರ್ಣನೆ, ವ್ಯಕ್ತಿಚಿತ್ರಣದಲ್ಲಿ ಕವಿ ಪ್ರಥಮದರ್ಜೆಯ ಕಲೆಗಾರಿಕೆಯನ್ನು ಮೆರೆದಿದ್ದಾನೆ. ಫರೀದುನ್ ಕಥೆಗಳು, ಜಾಲ್ ಮತ್ತು ರುಬ್ಬಾ, ರುಸ್ತುಮ್ ಮತ್ತು ಸೊಹ್ರಾಬ್‍ಸಿಂiÀೂವುಶ್ ಇಸ್ತಂದಿಯಾರ್, ಬೆಸುನ್, ರುಸ್ತುಮನ ರಕ್ಷಾ ಕುದುರೆ, ರುಸ್ತುಮನ ತಾಯಿ ರುದಾಬಿ, ರುಸ್ತುಮನ ಹೆಂಡತಿ ತಹಮೀನ, ತುರಾನಿಯನ್ ಮಗಳು ಫಿರಂಗಿಸ್, ಈ ಎಲ್ಲ ಪಾತ್ರಗಳೂ ಓದುಗರ ಮನಸ್ಸನ್ನು ಸಂಪೂರ್ಣವಾಗಿ ಸೆರೆಹಿಡಿಯುವಂತೆ ಚಿತ್ರಿತವಾಗಿವೆ.
ಷಹನಾಮಾ ಇರಾನ್ ಇತಿಹಾಸವನ್ನು ಅನುಕ್ರಮವಾಗಿ ಚಿತ್ರಿಸುವ ಉದ್ದೇಶದಿಂದ ಹೊರಟರೂ ಇತಿಹಾಸ ಒಂದು ನೆಪಮಾತ್ರ. ಸಾಹಿತ್ಯದ ಸೊಗಸೇ ಇಲ್ಲಿ ಪ್ರಧಾನ. ಫಿರ್ದೂಸಿಯ ಸಮಕಾಲೀನನಾಗಿದ್ದು ಅಕಾಲಮೃತ್ಯುವಿಗೆ ತುತ್ತಾದ ದಕೀಕೀ ಕವಿಯ (ಸು.930-977) ಅಪೂರ್ಣ ಕಾವ್ಯ ಷಹನಾಮಾಕ್ಕೆ ಮಾದರಿ. ದಕೀಕೀ ಇರಾನ್ ಚರಿತ್ರೆಯನ್ನೇ ಕುರಿತು ರಚಿಸಿದ ಸುಮಾರು 1,000 ಪದ್ಯಗಳನ್ನು ಫಿರ್ದೂಸಿ ತನ್ನ ಕಾವ್ಯದಲ್ಲಿ ಸಂಪೂರ್ಣವಾಗಿ ಬಳಸಿಕೊಂಡಿದ್ದಾನೆ. ಪರ್ಷಿಯಾದ ಜನಪದ ಸಾಹಿತ್ಯ ಕೂಡ ಷಹನಾಮಾ ಕಾವ್ಯಕ್ಕೆ ಜೀವತುಂಬುವಲ್ಲಿ ಕವಿಗೆ ನೆರವಾಗಿದೆ. ಕಾವ್ಯದಲ್ಲಿ ಬರುವ ಯುದ್ಧ ವರ್ಣನೆಗಳು, ಯುದ್ಧ ಕಲೆಗೆ ಸಂಬಂಧಪಟ್ಟ ವಿವರಗಳು ಸಮೃದ್ಧವಾಗಿದ್ದು ಕವಿಯ ಲೋಕಾನುಭವದ ದಟ್ಟಜ್ಞಾನಕ್ಕೆ ಪ್ರತೀಕವಾಗಿವೆ. ಕೋಟೆಕಾಳಗ, ಕತ್ತಿವರಸೆ, ಬಿಲ್ಲುವಿದ್ಯೆ, ಕುದುರೆಸವಾರಿ-ಈ ಬಗೆಯ ಯುದ್ಧ ಕೌಶಲದ ವರ್ಣನೆಗಳು ಕಣ್ಣಿಗೆ ಕಟ್ಟುವಂತಿದ್ದು ಗತಕಾಲವನ್ನು ಮೂರ್ತಗೊಳಿಸುತ್ತವೆ. ಇದರಿಂದ ಕವಿಗೆ ಯುದ್ಧ ಕಲೆಯಲ್ಲಿ ಸಾಕಷ್ಟು ಪ್ರತ್ಯಕ್ಷಾನುಭವ ಇತ್ತೆಂದು ಊಹಿಸಬಹುದಾಗಿದೆ. 

ಪರ್ಷಿಯನ್ ಸಾಹಿತ್ಯದಲ್ಲಿ ಷಹನಾಮಾಕ್ಕೆ ಬಲು ಎತ್ತರದ ಸ್ಥಾನವಿದೆ. ಪ್ರಪಂಚದ ನಾನಾ ಭಾಷೆಗಳಿಗೆ ಈ ಕಾವ್ಯ ಪದ್ಯ ಹಾಗೂ ಗದ್ಯ ರೂಪದಲ್ಲಿ ಅನುವಾದವಾಗಿದೆ. 19ನೆಯ ಶತಮಾನದವರೆಗೆ ಹಸ್ತಪ್ರತಿ ರೂಪದಲ್ಲೇ ಇದ್ದ ಈ ಕಾವ್ಯವನ್ನು ಫ್ರಾನ್ಸ್ ಸರ್ಕಾರ ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿಸಿ 6 ಸಂಪುಟಗಳಲ್ಲಿ ಪ್ರಕಟಿಸಿತು (1831-68). ಅನಂತರ ಇಂಗ್ಲಿಷ್, ಜರ್ಮನ್ ಮೊದಲಾದ ಭಾಷೆಗಳಲ್ಲಿ ಅದರ ಅನುವಾದ ಪ್ರಕಟವಾಯಿತು. ಇತ್ತೀಚೆಗೆ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್ ಬಹುಬಣ್ಣಗಳ ಚಿತ್ರಗಳೊಡನೆ ಅನೇಕ ಉಪಯುಕ್ತ ಪಾಂಡಿತ್ಯ ಪರಿಕರಗಳನ್ನು ಸೇರಿಸಿ ಎರಡು ಸಂಪುಟಗಳಲ್ಲಿ `ಷಹನಾಮಾವನ್ನು ಹೊರತಂದಿದೆ (1982). ಈ ಎರಡು ಸಂಪುಟಗಳ ಬೆಲೆ ಭಾರತದ 20 ಸಾವಿರ ರೂಪಾಯಿಗಳಾಗುತ್ತವೆ. ಪರ್ಷಿಯನ್ ಸಾಹಿತ್ಯದ ಮೇಲಂತೂ ಇದರ ಪ್ರಭಾವ ಅಪಾರ. ಷಹನಾಮಾದ ಅನೇಕ ಆಖ್ಯಾಯಿಕೆಗಳು ಕಾವ್ಯ, ನಾಟಕ ಇತ್ಯಾದಿ ಸ್ವತಂತ್ರ ರಚನೆಗಳಾಗಿ ಪುನರ್ ಸೃಷ್ಟಿಗೊಂಡಿವೆ. ಕುವೆಂಪು ಅವರು ತಮ್ಮ ಶ್ರೀರಾಮಾಯಣ ದರ್ಶನಂ ಮಹಾ ಕೃತಿಯಲ್ಲಿ ಫಿರ್ದೂಸಿಯನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ವಿ. ಸೀತಾರಾಮಯ್ಯನವರು ರುಸ್ತುಮ್ ಮತ್ತು ಸೊಹ್ರಾಬ್ ಪ್ರಸಂಗವೆನ್ನೆತ್ತಿಕೊಂಡು ಒಂದು ಅತ್ಯುತ್ತಮ ನಾಟಕವನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮ್ಯಾಥ್ಯೂ ಆರ್ನಾಲ್ಡ್ ಇಂಗ್ಲಿಷಿನಲ್ಲಿ ರಚಿಸಿರುವ ಸೊಹ್ರಾಬ್ ಮತ್ತು ರಸ್ತುಮ್ ಎಂಬ ಕವನ ಸುಪ್ರಸಿದ್ಧವಾಗಿದೆ. 

ಫಿರ್ದೂಸಿಯೇ ರಚಿಸಿದನೆನ್ನಲಾದ `ಯೂಸುಫ್-ಜುಲೇಕಾ ಮಸ್ನವಿ ಛಂದಸ್ಸಿನಲ್ಲಿರುವ ಒಂದು ಪ್ರಣಯಕಾವ್ಯ, ಹೋಮರನ ಇಲಿಯಡ್ ಕಾವ್ಯದಷ್ಟು ದೀರ್ಘವಾಗಿದೆ. ಕುರಾನಿನಲ್ಲಿಯ ಒಂದು ಕಥೆ ಈ ಕೃತಿಗೆ ಆಕರ. ಸುಲ್ತಾನ ಮಹಮೂದನ ಆಶ್ರಯ ತೊರೆದು ಫಿರ್ದೂಸಿ ಇರಾಕ್ ರಾಜನೊಬ್ಬನ ಆಶ್ರಯದಲ್ಲಿದ್ದ ಅವಧಿಯಲ್ಲಿ ಈ ಕಾವ್ಯ ರಚಿತವಾಯಿತೆಂದು ತಿಳಿದುಬರುತ್ತದೆ. ಷಹಾನಾಮಾ ಕಾವ್ಯಕ್ಕೆ ಹೋಲಿಸಿ ಹೇಳುವುದಾದರೆ ಇದರಲ್ಲಿ ಕಾವ್ಯಾಂಶ ಕಡಿಮೆ. ಸುಲ್ತಾನ ಮಹಮೂದನನ್ನು ಮೂದಲಿಸಿ ರಚಿತವಾಗಿರುವ ಇವನದೇ ಎನ್ನಲಾದ, ಈ ಕುರಿತು ಭಿನ್ನಾಭಿಪ್ರಾಯಗಳಿರುವ ವಿಡಂಬನ ಕಾವ್ಯ `ನಿಜಾಮಿ. ಈ ವಿಡಂಬನ ಕಾವ್ಯದ ನೂರು ದ್ವಿಪದಿಗಳು ದೊರಕಿವೆ. ಷಹನಾಮಾ ಗ್ರಂಥದಿಂದ ಪದ್ಯಸಾಲುಗಳನ್ನು ಅಲ್ಲಿ ಇಲ್ಲಿ ಆಯ್ದು ಸಂಕಲಿಸಿದ್ದು ಈ ಕೃತಿ ಎಂಬ ಅಭಿಪ್ರಾಯವೂ ವಿದ್ವಾಂಸರಲ್ಲಿದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ